ಜಲಕ್ಲೇದಿತ ವಸ್ತು -
ಯಾವುದಾದರೂ ರಚನೆ ಅಥವಾ ಸಿದ್ಧವಸ್ತುವಿನೊಳಕ್ಕೆ ನೀರು ಇಳಿಯುವುದನ್ನು ತಡೆಗಟ್ಟುವ ಪದಾರ್ಥ. ಅಲ್ಯೂಮಿನಮ್ ಅಸಿಟೇಟ್ [ಸಾಮಾನ್ಯ ಮತ್ತು ಕ್ಷಾರ] ಉಪಯೋಗಿಸಿ ಜಲಕ್ಲೇದಿತ ಬಟ್ಟೆಗಳನ್ನು ತಯಾರಿಸುತ್ತಾರೆ. ರಚನೆಗಳಲ್ಲಿ ಉಪಯೋಗಿಸುವ ಜಲಕ್ಲೇದಿತ ವಸ್ತುಗಳಲ್ಲಿ ಡಾಂಬರು (ಅಸ್ಫಾಲ್ಟ್), ಟಾರೆಣ್ಣೆ, ಕಪ್ಪುರಾಳ ಮುಂತಾದವನ್ನು ಹೆಸರಿಸಬಹುದು. ಪೆಟ್ರೋಲಿಯಮ್ ಡಾಂಬರಿನೊಂದಿಗೆ ಸಂತೃಪ್ತಗೊಳಿಸಿದ ಚಾವಣಿ ಫೆಲ್ಟಿನಿಂದ ಪೆರ್ಗಮೈನ್ ಎಂಬ ಜಲಕ್ಲೇದಿತ ವಸ್ತುವನ್ನು ತಯಾರಿಸುತ್ತಾರೆ. ಹೈಡ್ರೊeóÁಲ್ ಎಂಬುದು ಒಂದು ಉತ್ತಮ ಜಲಕ್ಲೇದಿತ ವಸ್ತು. ಆಕ್ಸಿಡೈಸ್ಡ್ ಪೆಟ್ರೋಲಿಯಮ್ ಡಾಂಬರಿನೊಂದಿಗೆ ಕಲ್ನಾರಿನ ಫೆಲ್ಟನ್ನು ಸಂತೃಪ್ತಗೊಳಿಸಿ ಇದನ್ನು ತಯಾರಿಸುತ್ತಾರೆ. ಭೂಗರ್ಭ ಮತ್ತಿತರ ರಚನೆಗಳಲ್ಲಿ ಜಲಕ್ಲೇದಿತ ಪದರಗಳಾಗಿ ಇದರ ಉಪಯೋಗ ಉಂಟು. ಮೆಟಲಿeóÁಲ್ ಎರಡು ಕಡೆಯೂ ಡಾಂಬರನ್ನು ಲೇಪಿಸಿರುವ ಸುಮಾರು 0.2mm. ದಪ್ಪದ ಅಲ್ಯೂಮಿನಿಯಮ್ ಪಟ್ಟಿ. ಜಲ ಅಥವಾ ಭೂಗರ್ಭ ರಚನೆಗಳ ಜಲಕ್ಲೇದನೆಗೆ ಇತರ ನಿರೋಧಕಗಳೊಂದಿಗೆ ಮೆಟಲಿeóÁಲನ್ನು ಬಳಸುವರು. ಕಾಲುವೆ, ಕೊಳವೆ ಮುಂತಾದವುಗಳಲ್ಲಿ ಜಲಕ್ಲೇದಿತ ಲೇಪನಕ್ಕಾಗಿ ಜಲಕ್ಲೇದಿತ ಗಾರೆಯ ಉಪಯೋಗವಿದೆ. ಪೋರ್ಟ್‍ಲ್ಯಾಂಡ್ ಸಿಮೆಂಟ್ ಮತ್ತು ಮರಳನ್ನು 1:2 ಪ್ರಮಾಣದಲ್ಲಿ ಬೆರೆಸಿ ಬಳಸಲಾಗುವುದು. ಇದಕ್ಕೆ ಜಲವಿಕರ್ಷಣೆಯ ವಸ್ತುಗಳನ್ನು ಸೇರಿಸಿ ಜಲಕ್ಲೇದನ ಸಾಮಥ್ರ್ಯವನ್ನು ಹೆಚ್ಚಿಸಬಹುದು.

	ಕಾಂಕ್ರೀಟನ್ನು ಜಲಕ್ಲೇದಿತಗೊಳಿಸುವಲ್ಲಿ ಎರಡು ವಿಧ : ನೀರಿನ ಒಳ ಹರಡುವ ಪ್ರಮಾಣವನ್ನು ತಗ್ಗಿಸುವಂತೆ ಯಾವುದಾದರೂ ವಸ್ತುವನ್ನು ಕಾಂಕ್ರಿಟಿಗೆ ಬೆರೆಸುವುದು ಒಂದು ವಿಧ; ತೇವ ಒಳಕ್ಕೆ ಹೋಗದಂತೆ ಕಾಂಕ್ರೀಟಿಗೆ ಲೇಪನ ಮಾಡುವುದು ಇನ್ನೊಂದು ವಿಧ.

	ಕ್ಯಾಲ್ಸಿಯಮ್ ಕ್ಲೋರೈಡ್, ಅಮೋನಿಯಮ್ ಸ್ಟಿಯರೇಟ್ ಮುಂತಾದ ರಾಸಾಯನಿಕವಾಗಿ ಶಕ್ತವಾದ ವಸ್ತುಗಳನ್ನಾಗಲಿ, ಕ್ಯಾಲ್ಸಿಯಮ್ ಕಾರ್ಬೊನೇಟ್, ಜೇಡಿಮಣ್ಣು ಮುಂತಾದ ಜಡವಸ್ತುಗಳನ್ನಾಗಲಿ, ಸುಣ್ಣದಕಲ್ಲು, ಸಿಲಿಕ ಮುಂತಾದವನ್ನಾಗಲಿ ಉಪಯೋಗಿಸಿದರೆ ಇವು ರಂಧ್ರಗಳನ್ನು ತಗ್ಗಿಸಿ ಜಲಕ್ಲೇದನವನ್ನು ಉಂಟುಮಾಡುತ್ತವೆ.

	ಮೇಲ್ಮೈ ಲೇಪನಗಳಾಗಿ ಉಪಯೋಗಿಸುವ ವಸ್ತುಗಳು ನೀರಿನ ದ್ರಾವಣಗಳು, ನೀರಿನ ನಿಲಂಬನಗಳು (ಸಸ್ಪೆನ್‍ಷನ್ಸ್) ಸಾಬೂನುಗಳು ಮುಂತಾದವುಗಳಾಗಿರಬಹುದು. ಮೆಗ್ನೀಸಿಯಮ್, ಸತು, ಸೀಸ ಮುಂತಾದವು ಕ್ಯಾಲ್ಸಿಯಮ್ ಹೈಡ್ರಾಕ್ಸೈಡ್ ಮತ್ತು ಕಾರ್ಬೊನೇಟುಗಳೊಂದಿಗೆ ರಾಸಾಯನಿಕವಾಗಿ ಕೂಡಿ ಅದ್ರಾವ್ಯ ಸಂಯುಕ್ತಗಳಾಗುತ್ತವೆ. ಇವು ಲೇಪನ ವಸ್ತುಗಳಾಗಬಹುದು. ಕಬ್ಬಿಣ ಚೂರುಗಳು, ಅಮೋನಿಯಮ್ ಕ್ಲೋರೈಡ್, ಅಮೋನಿಯ ದ್ರಾವಣದಲ್ಲಿ ಕೆಸೀನ್ ದ್ರಾವಣ ಮುಂತಾದವು ಪದಾರ್ಥಗಳ ಜಲ ನಿಲಂಬಕಗಳು.

	ಓಲಿಯಿಕ್ ಮತ್ತು ಸ್ಟಿಯರಿಕ್ ಆಮ್ಲಗಳ ಸೋಡಿಯಮ್ ಪೊಟ್ಯಾಸಿಯಮ್ ಅಥವಾ ಅಮೋನಿಯಮ್ ಲವಣಗಳು ಕಾಂಕ್ರೀಟಿನ ಕ್ಯಾಲ್ಸಿಯಮ್ ಹೈಡ್ರಾಕ್ಸೈಡಿನೊಂದಿಗೆ ಸಂಯೋಗ ಹೊಂದಿದಾಗ ಅದ್ರಾವ್ಯ ಕ್ಯಾಲ್ಸಿಯಮ್ ಸಾಬೂನುಗಳು ಸೃಷ್ಟಿಯಾಗುತ್ತವೆ. ಇವು ಜಲವಿಕರ್ಷಕಗಳು.
(ಕೆ.ಆರ್.ಎಂಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ